#kola #daivaradhane #baggupanjurli #panjurli #tulunadu #daivakola #culture
ಪಂಜುರ್ಲಿ ಎಂಬ ಪದವು ಸಾಂಪ್ರದಾಯಿಕವಾಗಿ “ಪಂಜಿದ ಕುರ್ಲೆ” ಎಂಬ ಪದದಿಂದ ಬಂದಿದೆ.[೪] ಇದರರ್ಥ ತುಳು ಭಾಷೆಯಲ್ಲಿ ಎಳೆಯ ಕಾಡುಹಂದಿ ಎಂದಾಗಿದೆ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಒಂದಾಗಿರುವ ಪಂಜುರ್ಲಿಯನ್ನು ತುಳುನಾಡಿನಾದ್ಯಂತ ವರಾಹ ರೂಪದಲ್ಲಿ ಪೂಜಿಸಲಾಗುತ್ತದೆ. ಪೂರ್ವಜರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಪಂಜುರ್ಲಿ ದೈವವನ್ನು ಪೂಜಿಸುತ್ತಿದ್ದರು
ತುಳುನಾಡಿನ ಪಕ್ಕದ ಘಟ್ಟದ ರಾಜ್ಯದಲ್ಲಿ ಎರಡು ಕಾಡು ಹಂದಿಗಳು ವಾಸಿಸುತ್ತಿದ್ದವು. ಆ ಕಾಡು ಹಂದಿಗಳು ಕಾಡಿನಲ್ಲಿ ಅಣ್ಣ ತಂಗಿಯರಾಗಿ ಬಾಳುತ್ತಿದ್ದವು. ಈ ಹಂದಿಗಳಿಗೆ ಮುಂದೆ ಸತಿಪತಿಗಳಾಗಿ ಸಂತಾನ ವೃದ್ಧಿಗಳಿಸಬೇಕೆಂಬ ಇಚ್ಛೆಯಾಯಿತು. ಗಂಡು ಹೆಣ್ಣು ಹಂದಿಗಳು ತಮ್ಮೊಳಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದವು. ಅವು ನೇರವಾಗಿ ಕುಕ್ಕೆಯ ಕ್ಷೇತ್ರಕ್ಕೆ ತೆರಳಿದವು. ಅಲ್ಲಿ ಸುಬ್ರಾಯ ದೇವರನ್ನು(ಕುಕ್ಕೆಯಲ್ಲಿರುವ ಮೂಲದ ನಾಗದೇವರು) ಭೇಟಿ ಆದವು. ಸುಬ್ರಾಯ ದೇವರಲ್ಲಿ ತಮ್ಮಲ್ಲಿಯ ಸಹೋದರ ಭಾವವವನ್ನು ಕಡಿದು ಗಂಡ- ಹೆಂಡತಿಯಾಗಿ ಬಾಳುವಂತೆ ಕರುಣಿಸಬೇಕೆಂದು ಭಕ್ತಿಯಿಂದ ಬೇಡಿಕೊಂಡವು. ಅವುಗಳ ಇಚ್ಛೆಯನ್ನು ಕೇಳಿ ಸುಬ್ರಾಯ ದೇವರಿಗೆ ಕರುಣೆ ಬಂದು, ಆ ಹಂದಿಗಳ ಅಣ್ಣ-ತಂಗಿಯರ ಭಾವವನ್ನು ಕಡಿದು ಸತಿಪತಿಗಳಾಗುವಂತೆ ವರ ನೀಡಿದರು. ಹಂದಿಗಳು ಇದರಿಂದ ಸಂತಸಗೊಂಡು ಕಾಡನ್ನು ಪ್ರವೇಶಿಸಿದವು. ಅವುಗಳ ಅನ್ಯೋನ್ಯ ಬದುಕಿನ ಸಂಕೇತವಾಗಿ ಆ ಹಂದಿಗಳಿಗೆ ನಾಲ್ಕು ಮರಿಗಳು ಹುಟ್ಟಿಕೊಂಡವು. ಹಂದಿ ಮರಿಗಳಲ್ಲಿ ಒಂದು ಮರಿಯು ಈಶ್ವರ ದೇವರ ಹೂದೋಟವನ್ನು ಪ್ರವೇಶಿಸಿತು. ಆ ಹಂದಿ ಮರಿಯ ಅಂದ ಚೆಂದದ ರೂಪವನ್ನು ಕಂಡು ಈಶ್ವರ ದೇವರ ಪತ್ನಿಯಾದ ಪಾರ್ವತಿ ದೇವಿ ಮೋಹಗೊಂಡರು. ಅದನ್ನು ಪ್ರೀತಿಯಿಂದ ಸಲಹತೊಡಗಿದರು. ಆ ಮರಿಯು ಬೆಳೆಯತೊಡಗಿದಂತೆ ಎಲ್ಲೆಂದರಲ್ಲಿ ತಿರುಗಾಡತೊಡಗಿತು. ಕೊನೆಗೆ ತನ್ನ ದಾಡೆಯಿಂದ ಈಶ್ವರ ದೇವರ ಹೂದೋಟವನ್ನು ಹಾಳುಗೆಡವಲು ಪ್ರಾರಂಭಿಸಿತು. ಹಂದಿಯ ಉಪಟಳವು ಸಹಿಸಲು ಅಸಾಧ್ಯವಾಯಿತು. ಕೊನೆಗೆ ಪರಮೇಶ್ವರ(ಶಿವ/ಈಶ್ವರ) ಕುಪಿತರಾಗಿ ಅದನ್ನು ಕೊಂದು ಬಿಟ್ಟರು. ಈ ವಿಷಯ ತಿಳಿದಾಗ ಪಾರ್ವತಿದೇವಿ ಬಹಳ ದುಃಖ ಪಟ್ಟರು. ತಾನೇ ಪ್ರೀತಿಯಿಂದ ಸಾಕಿ ಸಲಹಿದ ಹಂದಿಮರಿಗೆ ಜೀವದಾನ ಮಾಡುವಂತೆ ಬಹುವಾಗಿ ಪ್ರಾರ್ಥಿಸಿಕೊಂಡರು. ಮಡದಿಯ ಇಚ್ಛೆಯಂತೆ ಪರಮೇಶ್ವರ ಹಂದಿಗೆ ಜೀವದಾನ ಮಾಡಿದರು.
ಆ ಬಳಿಕ ಶಿವ ದೇವರು ಆ ಹಂದಿಯ ಮರಿಗೆ ದೈವಶಕ್ತಿಯನ್ನು ಕರುಣಿಸಿದರು. "ನೀನು ವರಾಹರೂಪಿಯಾದ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸು. ಅಲ್ಲಿ ಸತ್ಯ, ಧರ್ಮ, ನ್ಯಾಯವನ್ನು ರಕ್ಷಿಸುವ ದೈವವಾಗಿ ಮೆರೆದಾಡಿಕೊಂಡಿರು. ಭೂಲೋಕದಲ್ಲಿ ಮಾನವರು ನಿನಗೆ ಅರ್ಪಿಸುವ ನೈವೇದ್ಯಾದಿಗಳನ್ನು ಸ್ವೀಕರಿಸು. ಅವರ ಬೆಳೆಯನ್ನು ರಕ್ಷಣೆ ಮಾಡುವ, ಕಷ್ಟ, ಕಾರ್ಪಣ್ಯಗಳನ್ನು, ರೋಗರುಜಿನಗಳನ್ನು ಪರಿಹರಿಸಿ ಕಾಯುವ ರಕ್ಷಣೆಯ ದೈವವಾಗಿ ಕೀರ್ತಿಯನ್ನು ಬೆಳಗಿಕೊಂಡಿರು. ಅದೇ ರೀತಿ ನಿನ್ನನ್ನು ಧಿಕ್ಕರಿಸಿ ಅಹಂಕಾರದಿಂದ ನಡೆಯುವವರನ್ನು ಶಿಕ್ಷಿಸಿ, ಸರಿದಾರಿಗೆ ತಿರುಗಿಸಿ ನಿನ್ನಲ್ಲಿ ಭಕ್ತಿ ಹುಟ್ಟುವಂತೆ ಮಾಡು" ಎಂದು ವರಪ್ರಧಾನ ಮಾಡಿ ಕಳುಹಿಸಿದರು. ದೇವರ ಅಪ್ಪಣೆ ಪ್ರಕಾರ ಪಂಜುರ್ಲಿಯು ದೈವಶಕ್ತಿಯಾಗಿ ಭೂಲೋಕ ಪ್ರವೇಶಿಸಿತು.