MENU

Fun & Interesting

ಶ್ರೀ ಬಾಣೇಶ್ವರ ದೇವಾಲಯ, ಮಗ್ಗೆ, ಕೆ. ಆರ್. ಪುರ, ರಾಗಲ ಕುಪ್ಪೆ | Baneshwara Temple Magge | HD Kote | Mysuru

mohan shivashankar 119 lượt xem 1 week ago
Video Not Working? Fix It Now

ಮೈಸೂರಿನಿಂದ ಸುಮಾರು 75 ಕಿ. ಮೀ. ದೂರದಲ್ಲಿ ಕಾಡಂಚಿನ ಪ್ರದೇಶ ಮಗ್ಗೆ. ಇದು ಹೆಗ್ಗಡದೇವನ ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯಲ್ಲಿದೆ. ಈ ಭಾಗದಲ್ಲಿ ಮಗ್ಗೆ ಎಂಬ ಹೆಸರು ಕೇಳಿದ ತಕ್ಷಣ ಜನರ ನೆನಪಿಗೆ ಬರುವುದು ಶ್ರೀ ಬಾಣೇಶ್ವರ ಸ್ವಾಮಿ ದೇವಾಲಯ. ಸುಮಾರು 600 ವರ್ಷಗಳ ಹಿಂದೆ ಸ್ಥಾಪಿತವಾಗಿರುವ ಈ ಪುರಾಣ ಪ್ರಸಿದ್ಧ ದೇವಸ್ಥಾನವು ಕಪಿಲಾ ಜಲಾಶಯ ನಿರ್ಮಾಣದ ವೇಳೆ ಮುಳುಗಡೆಯಾಗಿ ಪುನರ್ವಸತಿಗೊಂಡಿರುವ ಹೊಸ ಮಗ್ಗೆಯಲ್ಲಿ ಪುನರ್ನಿರ್ಮಿತಗೊಂಡಿತ್ತು, ಆದರೆ ನಿರ್ಲಕ್ಷ್ಯದಿಂದ ಸೊರಗಿತ್ತು.

ಈ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಶ್ರೀ ಬಾಣೇಶ್ವರ ದೇವಾಲಯವನ್ನು ಈ ದೇವಾಲಯದ ಒಕ್ಕಲು ಕುಟುಂಬಗಳು, ಭಕ್ತ ಸಮುದಾಯ ಹಾಗೂ ಗ್ರಾಮಸ್ಥರು ಸೇರಿ ಶ್ರೀ ಬಾಣೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಗ್ಗೆ, ಕೆ. ಆರ್. ಪುರದ ವತಿಯಿಂದ ಕ್ರಿ. ಶ. 2008ರಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಸುಮಾರು 30ಲಕ್ಷ ರೂಪಾಯಿಗಳ ವೆಚ್ಚದೊಂದಿಗೆ ಕೈಗೊಂಡಿರುತ್ತಾರೆ.

ಈ ದೇವಾಲಯದಲ್ಲಿ ಬಾಣೇಶ್ವರನೊಂದಿಗೆ ಗಣಪತಿ, ಚೆನ್ನವೀರಭಧ್ರ, ಸುಬ್ರಹ್ಮಣ್ಯ, ನವಗ್ರಹ ದೇವರುಗಳ ಮೂರ್ತಿಗಳನ್ನು ಪುನರ್ಪ್ರತಿಷ್ಠಾಪಿಸಿರುತ್ತಾರೆ. ಈ ದೇವಾಲಯದ ಐತಿಹ್ಯವನ್ನು ಹೇಳುವ ಒಂದು ಶಿಲಾಶಾಸನ ಸಹ ಲಭ್ಯವಿದ್ದು ಅದನ್ನು ಆಲಯದ ಮುಂದೆ ನಿಲ್ಲಿಸಲಾಗಿದೆ.

ಈಗ ಪ್ರತಿದಿವಸ ಪೂಜಾಕಾರ್ಯಗಳು ನೇಮ ನಿಷ್ಠೆಯಿಂದ ನಡೆಯುತ್ತಾ ಬಂದಿದೆ. ಈ ದೇವಾಲಯದ ವೈಶಿಷ್ಟ್ಯವೆಂದರೆ ಪ್ರತೀವರ್ಷ ಕಾರ್ತಿಕ ಸೋಮವಾರದಂದು ದೀಪೋತ್ಸವವನ್ನು ಬಹಳ ವೈಭವದಿಂದ ನಡೆಸುತ್ತಾ ಬಂದಿರುತ್ತಾರೆ ಹಾಗೂ ಶಿವರಾತ್ರಿಯಂದು ಹವನ, ಹೋಮ ನಡೆಸಿ ಪ್ರತಿ ಜಾವದಲ್ಲೂ ಅಭಿಷೇಕ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ರಾತ್ರಿ ಜಾಗರಣೆ ಮಾಡುತ್ತಾ ಹರಿಕಥೆ, ನಾಟಕ, ಭಕ್ತಿಗೀತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸೂರ್ಯೋದಯದ ನಂತರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿಂದ ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾ ಬಂದಿರುತ್ತಾರೆ.

ಈ ದೇವಾಲಯನ್ನು ನೋಡಬಯಸುವವರು ಮೈಸೂರಿನಿಂದ ಮಾನಂದವಾಡಿಗೆ ಹೋಗುವ ಬಸ್ಸಿನಲ್ಲಿ ಹೊರಟು ಮುಂದೆ ಹ್ಯಾಂಡ್ ಪೋಸ್ಟ್ ಮೂಲಕ ಹಾದು ಹೋಗಿ ಅಂತರಸಂತೆಯ ನಂತರ ಕೆ.ಆರ್.ಪುರ (ಮಗ್ಗೆ) ಗ್ರಾಮದಲ್ಲಿ ಇಳಿದರೆ ಶ್ರೀ ಬಾಣೇಶ್ವರ ದೇವಾಲಯದ ದರ್ಶನ ಮಾಡಬಹುದು.

ಎಂ. ಎನ್. ವೆಂಕಟ ಕೃಷ್ಣನ್, ವಿದ್ಯಾರಣ್ಯಪುರಂ, ಮೈಸೂರು.

Comment